Breaking NewsState News

ಗುಂಡ್ಲುಪೇಟೆಯಲ್ಲಿ ಕರ್ನಾಟಕ ಬಂದ್ ಯಶಸ್ವಿ

Karnataka bandh successful in Gundlupet

ಗುಂಡ್ಲುಪೇಟೆ: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ಖಂಡಿಸಿ ಬಿಜೆಪಿ, ರೈತ ಸಂಘ ಸೇರಿದಂತೆ ವಿವಿಧ ಪ್ರಗತಿಪರ ಹಾಗು ಕನ್ನಡ ಪರ ಸಂಘಟನೆಗಳು ಕರೆಕೊಟ್ಟಿದ್ದ ಸೆ.29ರ ಕರ್ನಾಟಕ ಬಂದ್ ಗುಂಡ್ಲುಪೇಟೆಯಲ್ಲಿ ಸಂಪೂರ್ಣ ಯಶಸ್ವಿಯಾಯಿತು. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವ್ಯಾಪಾರಸ್ಥರು ಹಾಗು ವರ್ತಕರು ಬಂದ್‍ಗೆ ಬೆಂಬಲ ಸೂಚಿಸಿದ್ದರು.

ಗುಂಡ್ಲುಪೇಟೆಯಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಯಾವುದೇ ವಾಹನಗಳು ರಸ್ತೆಗಿಳಿಯದ ಕಾರಣ ರಾಷ್ಟ್ರೀಯ ಹೆದ್ದಾರಿ ರಸ್ತೆ ಬಿಕೋ ಎನ್ನುತ್ತಿತ್ತು. ರಾಷ್ಟ್ರೀಯ ಹೆದ್ದಾರಿ, ಕಿತ್ತೂರು ರಾಣಿ ಚನ್ನಮ್ಮ ರಸ್ತೆ, ಊಟಿ ಸರ್ಕಲ್, ಟಿಪ್ಪು ಸರ್ಕಲ್, ಚಾಮರಾಜನಗರ ರಸ್ತೆ ಸೇರಿದಂತೆ ಇತರೆಡೆ ಮುಂಜಾನೆಯಿಂದಲೇ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ವರ್ತಕರು ಮುಚ್ಚಿದ್ದ ಕಾರಣ ಜನರ ಓಡಾಟ ವಿರಳವಾಗಿತ್ತು.

ಹೆದ್ದಾರಿಯಲ್ಲೇ ಬೆಳಗಿನ ತಿಂಡಿ ಸೇವನೆ: ಕರ್ನಾಟಕ ಬಂದ್ ಹಿನ್ನಲೆ ರೈತ ಸಂಘ, ಮಾನವ ಬಂಧುತ್ವ ವೇದಿಕೆ, ಕಾವಲು ಪಡೆ ಸಂಘಟನೆ, ಎಸ್‍ಡಿಪಿಐ ಸಂಘಟನೆ, ಮಾನವ ಹಕ್ಕುಗಳ ಸಮಿತಿ, ಬಿಎಸ್‍ಪಿ ಮತ್ತು ವೈಭವ ಕರ್ನಾಟಕ ಸೇರಿದಂತೆ ವಿವಿಧ ಪ್ರಗತಿ ಪರ ಸಂಘಟನೆಗಳು ಬೆಳಗ್ಗೆ 7 ಗಂಟೆಗೆ ಪಟ್ಟಣದ ಪ್ರವಾಸಿ ಮಂದಿರದ ಮುಂದೆ ಜಮಾಯಿಸಿ ಎತ್ತಿನ ಗಾಡಿ ಮೂಲಕ ಪ್ರತಿಭಟನಾ ಜಾಥಾ ಮೆರವಣಿಗೆ ನಡೆಸಿದರು.

ಪ್ರವಾಸಿ ಮಂದಿರದಿಂದ ಜಾಥಾ ಹೊರಟ ರೈತ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಚಾಮರಾಜನಗರ ರಸ್ತೆ ಮೂಲಕ ಸಾಗಿ ಟಿಪ್ಪು ಸರ್ಕಲ್, ಕಿತ್ತೂರು ರಾಣಿ ಚನ್ನಮ್ಮ ರಸ್ತೆ, ಹೆದ್ದಾರಿ ಮೂಲಕ ತೆರಳಿ ರಾಷ್ಟ್ರೀಯ ಹೆದ್ದಾರಿ ಕೆಎಸ್‍ಆರ್‍ಸಿ ಬಸ್ ನಿಲ್ದಾಣದ ಮುಂದೆ ಜಮಾವಣೆಗೊಂಡು ಮಾನವ ಸರಪಳಿ ನಿರ್ಮಿಸಿ ರಾಜ್ಯ ಬಿಜೆಪಿ ಸರ್ಕಾರ ಹಾಗು ಸಂಸದರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಈ ವೇಳೆ ಧರಣಿ ನಿರತರು ಹೆದ್ದಾರಿ ರಸ್ತೆಯಲ್ಲೇ ಬೆಳಗಿನ ತಿಂಡಿ ಸೇವಿಸಿ ಬಂದ್ ಯಶಸ್ವಿಗೊಳಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವ ಸಂದರ್ಭದಲ್ಲಿ ಸರ್ಕಾರ ರೈತರ ಹಿತ ಕಾಯದೆ ತಮಿಳುನಾಡಿಗೆ ನೀರು ಹರಿಸುತ್ತಿರುವ ಕ್ರಮ ಖಂಡನೀಯ. ಈ ಕೂಡಲೇ ರಾಜ್ಯದ ನೈಜ ಸ್ಥಿತಿಯನ್ನು ಸುಪ್ರೀಂ ಕೋರ್ಟ್ ತಿಳಿಸಿ ನೀರು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ರೈತ ಸಂಘದ ತಾಲೂಕು ಅಧ್ಯಕ್ಷ ದಿಲೀಪ್, ಹಂಗಳ ಮಾಧು, ಮಾನವ ಬಂಧುತ್ವ ವೇದಿಕೆಯ ಸುಭಾಷ್ ಮಾಡ್ರಹಳ್ಳಿ, ಕರವೇ ಪ್ರವೀಣ್ ಶೆಟ್ಟಿ ಬಣದ ಮಂಜುನಾಥ್, ಎಸ್‍ಡಿಪಿಐ ಅಧ್ಯಕ್ಷ ಸರ್ಫರಾಜ್, ಕಾವಲು ಪಡೆ ಸಂಘಟನೆ ತಾಲೂಕು ಅಧ್ಯಕ್ಷ ಎ.ಅಬ್ದುಲ್ ಮಾಲೀಕ್, ಬಿಎಸ್‍ಪಿ ಗೋವಿಂದರಾಜು, ವೈಭವ ಸಂಘಟನೆ ಅಧ್ಯಕ್ಷ ಜನಾರ್ಧನ್ ಸೇರಿದಂತೆ ವಿವಿಧ ಸಂಘಟನೆ ಮುಖಂಡರು ಹಾಜರಿದ್ದರು.

ಬಿಗಿ ಪೊಲೀಸ್ ಬಂದೋ ಬಸ್ತ್: ಕರ್ನಾಟಕ ಬಂದ್ ಕಾರಣ ಗುಂಡ್ಲುಪೇಟೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ನಿಷೇಧಾಜ್ಞೆ ವಿಧಿಸಲಾಗಿತ್ತು. ಇದರ ಮಧ್ಯೆ ಪಟ್ಟಣದಲ್ಲಿ ಬಿಜೆಪಿ, ರೈತ ಸಂಘ ಸೇರಿದಂತೆ ವಿವಿಧ ಕನ್ನಡಪರ, ಪ್ರಗತಿಪರ ಸಂಘಟನೆಗಳು ರಸ್ತೆಗಿಳಿದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇನ್ಸ್ ಪೆಕ್ಟರ್ ಪರಶಿವಮೂರ್ತಿ ಹಾಗೂ ಸಬ್ ಇನ್ಸ್ ಪೆಕ್ಟರ್ ಸಾಹೇಬಗೌಡ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಒದಗಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದೆ ಬಂದ್ ಯಶಸ್ವಿಯಾಯಿತು.

ರಸ್ತೆಗಿಳಿಯದ ಕೆಎಸ್‍ಆರ್‍ಟಿಸಿ ಬಸ್‍ಗಳು: ಗುಂಡ್ಲುಪೇಟೆ ಬಂದ್‍ಗೆ ವಿವಿಧ ಸಂಘಟನೆಗಳು ಬೆಂಬಲ ನೀಡಿ, ರಾಷ್ಟ್ರೀಯ ಹೆದ್ದಾರಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಮುಂದೆ ಜಮಾಯಿಸಿದ ಹಿನ್ನೆಲೆ ಯಾವೊಂದು ಕೆಎಸ್‍ಆರ್‍ಟಿಸಿ ಬಸ್‍ಗಳು ಬೆಳಗ್ಗೆಯಿಂದ ಸಂಜೆ ತನಕ ರಸ್ತೆಗೆ ಇಳಿಯದೆ ಡಿಪೋದಲ್ಲೆ ನಿಂತಿದ್ದವು. ಬೆಳಗಿನ ವೇಳೆ ಮೈಸೂರಿಗೆ ತೆರಳುವ ಕೆಲ ಪ್ರಯಾಣಿಕರು ಪರದಾಡಿದರು. ನಂತರ ವಿಧಿ ಇಲ್ಲದೆ ಖಾಸಗೀ ವಾಹನಗಳ ಮೊರೆ ಹೋದರು.

ವರದಿ: ಬಸವರಾಜು ಎಸ್ ಹಂಗಳ ಗುಂಡ್ಲುಪೇಟೆ. 

Related Articles

Leave a Reply

Your email address will not be published. Required fields are marked *

Back to top button