Breaking NewsEducation

ನಮ್ಮೂರು ನಮ್ಮ ಹೆಮ್ಮೆ

ನಮ್ಮೂರು ರಾಂಪುರ ಇದು ಕೇವಲ ಒಂದು ಊರು ಅಲ್ಲ, ಐತಿಹಾಸಿಕವಾಗಿ, ಪೌರಣಿಕವಾಗಿ, ವ್ಯವಹಾರಿಕವಾಗಿ, ಶೈಕ್ಷಣಿಕವಾಗಿ ಹೀಗೆ  ತನ್ನದೇಯಾದ ಹಿನ್ನಲೆಯಿಂದ  ಬ್ರಾಂಡ್ ಹುಟ್ಟು ಹಾಕಿದ ಗ್ರಾಮ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನಲ್ಲಿರುವ ಈ ಗ್ರಾಮವು ಅನೇಕ ಐತಿಹಾಸಿಕ ಸ್ಥಳಗಳನ್ನು ಮಡಿಲಲ್ಲಿಟ್ಟುಕೊಂಡು 40ಕ್ಕೂ ಹೆಚ್ಚು ಗ್ರಾಮಗಳಿಗೆ ವ್ಯಾಪರ ವಹಿವಾಟಿಗೆ ಕೇಂದ್ರ ಸ್ಥಾನವಾಗಿದೆ. ರಾಂಪುರವು ಬಳ್ಳಾರಿಗೆ ಕೇವಲ 36 ಕಿಲೋ ಮೀಟರ್ ದೂರದಲ್ಲಿದ್ದು, ಬಳ್ಳಾರಿ – ಬೆಂಗಳೂರು ಹೆದ್ದಾರಿ ಇಲ್ಲಿ ಹಾದು ಹೋಗುತ್ತದೆ.

ಪ್ರಾಚೀನ ಹೆಸರುಗಳು: ರಾಮಾಯಣ ಪ್ರಸಿದ್ದಿಯ ಜಟಂಗಿ ರಾಮೇಶ್ವರ ಬೆಟ್ಟದ ನೆರಳಿನಲ್ಲಿರುವ ಕಾರಣ ಈ ಗ್ರಾಮಕ್ಕೆ ರಾಂಪುರ ಎಂಬ ಹೆಸರು ಬಂದರೆ ಮತ್ತೊಂದೆದೆ ವೀಳ್ಯದೆಲೆ, ಬದನೆಕಾಯಿ, ಈರುಳ್ಳಿ. ಈ ಹೆಸರುಗಳು ರಾಂಪುರದೊoದಿಗೆ ಇನ್ನೂ ಬೆಸೆದುಕೊಂಡಿವೆ. ಕಾರಣ ಅಂದು ಬೆಳೆಯುತಿದ್ದ ವೀಳ್ಯದೆಲೆ, ರುಚಿಗೆ ಹೆಸರುವಾಸಿಯಾದ  ರಾಂಪುರ ಬದನೆಕಾಯಿ, ಈರುಳ್ಳಿ, ಇವುಗಳಿಂದ ಖ್ಯಾತಿ ಪಡೆದು.  ಜನಮಾನಸದಲ್ಲಿ ಅಚ್ಚಳಿಯದೆ ಉಳಿದು ಕೊಂಡಿರುವುದೇ ನಮ್ಮೂರಿನ ವಿಶೇಷತೆ.
ವ್ಯಾವಹಾರಿಕವಾಗಿ ಖ್ಯಾತಿ: ಎಪ್ಪತ್ತರ ದಶಕದಲ್ಲಿ ಈ ಗ್ರಾಮವು ಎಲೆರಾಂಪುರ ಎನ್ನುವ ಹೆಸರಿನಿಂದ ಪ್ರಚಲಿತದಲ್ಲಿತ್ತು. ಇಂದಿಗೂ ಹಳೆಯ ಜನ ಎಲೆ ರಾಂಪುರ ಎಂದೇ ಗುರುತಿಸುತ್ತಾರೆ. ಆಗ ರಾಂಪುರದ ಸುತ್ತ ಮುತ್ತ ಇದ್ದ ತೋಟಗಳಲ್ಲಿ ಉತ್ತಮ ಗುಣಮಟ್ಟದ ವೀಳ್ಯದೆಲೆ ಬೆಳೆಯುತಿದ್ದರು. ಆ ರುಚಿಗೆ ಮಾರು ಹೋಗಿದ್ದ ಜನ, ಇಲ್ಲಿಂದಲೆ ವೀಳ್ಯದೆಲೆಗಳನ್ನ ತರಿಸಿಕೊಳ್ಳುತಿದ್ದರು. ಸುತ್ತಮುತ್ತ ಹಳ್ಳಿಗಳಿಂದ ಅಲ್ಲದೆ  ಹಲವಾರು ಪಟ್ಟಣಗಳಿಗೆ ಸರಬರಾಜು ಆಗುತಿತ್ತು. ತೋಟಗಳಲ್ಲಿ ಪ್ರಮುಖವಾಗಿ ವೀಳ್ಯದೆಲೆ ಹಿಂದಿನ ಕಾಲದ ವಿಶೇಷತೆ ಯಾಗಿತ್ತು. ರಾಂಪುರ ಎನ್ನುವ ಹೆಸರಿನ ಊರುಗಳು ನೂರಾರು ಇವೆ. ಆದರೆ ಜನ ಇಂದಿಗೂ ರಾಂಪುರವನ್ನ ಗುರುತಿಸಬೇಕು ಎಂದರೆ ಬಳ್ಳಾರಿ ಬೆಂಗಳೂರು ರಸ್ತೆಯಲ್ಲಿ ಹಾದು ಹೋಗುವ ಎಲೆರಾಂಪುರ ಎಂದೇ ಕರೆಯುತ್ತಾರೆ.

ರಾಂಪುರ ಈರುಳ್ಳಿ:- ಕಳೆದ ಮೂರು ದಶಕಗಳಿಂದ ರಾಂಪುರ ಈರುಳ್ಳಿ ಎಂದೇ ಪ್ರಚಲಿತದಲ್ಲಿದೆ. ಇಲ್ಲಿ ಬೆಳೆದ ಈರುಳ್ಳಿಯು ಅಧಿಕ ಇಳುವರಿ ಕೊಡುತ್ತದೆ, ಈ ಈರುಳ್ಳಿ, ಕೆಂಪು ಮತ್ತು ಕಪ್ಪು ಮಣ್ಣಿನಲ್ಲಿ ಬೆಳೆಯುತ್ತದೆ, ಹೀಗಾಗಿ ಈ ಈರುಳ್ಳಿ ಬೀಜ ಕೊಳ್ಲಲು, ಕರ್ನಾಟಕ ಸೇರಿದಂತೆ ಆಂಧ್ರ ತಮಿಳುನಾಡಿಂದ ರೈತರು ಬರುತ್ತಾರೆ.
ರಾಂಪುರ ಬದನೆ: ಎಂಬತ್ತರ ದಶಕದಲ್ಲಿ ಈ ಗ್ರಾಮವು ಹೊಸ ಬದಲಾವಣೆಗೆ ಮುನ್ನುಡಿ ಬರೆಯಿತು. ಆ ಸಮಯದಲ್ಲಿ ರೈತರು ತಮ್ಮ ಹೊಲಗಳಲ್ಲಿ ಅತಿ ಹೆಚ್ಚಾಗಿ ಬದನೆಕಾಯಿ ಬೆಳೆಯುತಿದ್ದರು. ಆ ಬದನೆಕಾಯಿಯ ರುಚಿ ಎಲ್ಲರ ಮನೆಮಾತಾಗಿತ್ತು. ಅಂದಿನ ಕಾಲದಲ್ಲಿ ಏನೇ ಅಡಿಗೆ ಮಾಡಿದ್ರು. ಬದನೆಕಾಯಿ ಇರಲೇ ಬೇಕೆಂಬ ಅಲಿಖಿತ ನಿಯಮ ಬಂದಿತು. ಇದರ ಖ್ಯಾತಿ ಎಷ್ಟರ ಮಟ್ಟಿಗೆ ಬೆಳೆಯಿತು ಅಂದರೆ, ಬೇಡಿಕೆ ಹೆಚ್ಚಾಗಿ  ರಾಂಪುರದಿAದ, ನಮ್ಮ ರಾಜ್ಯ ವಲ್ಲದೆ, ಮಹರಾಷ್ಟ್ರ, ಆಂಧ್ರ, ಕೇರಳ ತಮಿಳುನಾಡಿಗೆ ಸಾಗಾಟ ಮಾಡಲಾಗುವ ಅವಕಾಶ ಒದಗಿ ಬಂತು. ಈ ಕಾರಣದಿಂದ ರಾಂಪುರ ಬದನೆಕಾಯಿ ಹೆಸರು ಪ್ರಚಲಿತಕ್ಕೆ ಬಂತು.

ಧಾರ್ಮಿಕವಾಗಿ ಖ್ಯಾತಿ: ಧಾರ್ಮಿಕ ಶ್ರೇಷ್ಠತೆಯಿಂದ ಪ್ರಸಿದ್ಧಿ ಪಡೆದಿರುವ ಈ ಊರಿನಲ್ಲಿ ಪ್ರತಿ ವರ್ಷವು ಮೈಸೂರು ದಸರಾ ಮಾದರಿಯಲ್ಲಿಯೇ ಆಚರಣೆ ಮಾಡುತ್ತಾರೆ, ಗ್ರಾಮದಲ್ಲಿ ಪೇಟೆ ಬಸವೇಶ್ವರ ಸ್ವಾಮಿ , ಈಶ್ವರ ದೇವಸ್ಥಾನ, ಏಳು ಮಕ್ಕಳಮ್ಮ ತಾಯಿಯ ದೇವಸ್ಥಾನ, ಬನ್ನಿ ಮಹಾಂಕಾಳಿ ದೇವಸ್ಥಾನ, ಓಂಕಾರೇಶ್ವರ ದೇವಸ್ಥಾನ, ಭದ್ರಕಾಳಿ ಸಮೇತ ವೀರಭದ್ರಸ್ವಾಮಿಯ ದೇವಸ್ಥಾನಗಳು ಇಂದಿಗೂ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಹೋಗಲಾಡಿಸಲು ಆಭಯ ನೀಡುವ ಶ್ರದ್ಧಾ ಭಕ್ತಿಯ ಕೇಂದ್ರಗಳಾಗಿವೆ.
ಮಾದರಿಯಾದ ಸ್ಥಳಿಯ ಆಡಳಿತ: ಇಲ್ಲಿನ ಸ್ಥಳಿಯ ಆಡಳಿತವು ತನ್ನ ಆಡಳಿತದ ವ್ಯಾಪ್ತಿಯಲ್ಲಿ ಯಾವುದೇ ಸಮುದಾಯದವರು ಮರಣ ಹೊಂದಿದಲ್ಲಿ ಇವರ ಅಂತ್ಯ ಸಂಸ್ಕಾರಕ್ಕೆAದು 2 ಸಾವಿರ ರೂ ಹಣ ನೀಡಿ ಸಾಂತ್ವಾನ ಹೇಳುವ ಪದ್ಧತಿ ಜಾರಿಗೆ ತಂದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಇದರ ಜೊತೆ ಕಸ ಮುಕ್ತ, ಜಂಗಲ್ ಮುಕ್ತ, ಕತ್ತಲೆ ಮುಕ್ತ ಎನ್ನುವ ಹೆಸರಿನಲ್ಲಿ ತನ್ನ ವ್ಯಾಪ್ತಿಯನ್ನು ಸ್ವಚ್ಚವಾಗಿಡಲು ಸ್ಥಳಿಯ ಆಡಳಿತವು ಶ್ರಮಿಸುತ್ತಿದೆ. ತನ್ನ ವ್ಯಾಪ್ತಿಯಲ್ಲಿ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರ, ಪೋಲಿಸ್ ಠಾಣೆ ಮುಂತಾದವುಗಳನ್ನು ಹೊಂದಿದೆ.


ರಾಂಪುರ ಗ್ರಾಮದ ಸುತ್ತಮುತ್ತಲಿನಲ್ಲಿರುವ ಐತಿಹಾಸಿಕ ಸ್ಥಳಗಳು:  ರಾಂಪುರದಿoದ 3 ಕಿ.ಮಿ ಅಂತರದಲ್ಲಿ ಜಟಂಗಿ ರಾಮೇಶ್ವರ ಬೆಟ್ಟವಿದೆ ಇಲ್ಲಿ ರಾಮೇಶ್ವರ ದೇವಸ್ಥಾನ, ಸೀತೆಹೆಜ್ಜೆ, ಜಟಾಯು ಪಕ್ಷಿಯ ಸಮಾಧಿ, ಸಾಮ್ರಾಟ್ ಅಶೋಕನ ಶಾಸನಗಳು ಇಲ್ಲಿವೆ. ಅದಲ್ಲದೆ 6 ಕಿ.ಮಿ ಅಂತರದಲ್ಲಿ ಅಶೋಕ ಸಿದ್ದಾಪುರದಲ್ಲಿ ಅಶೋಕ ಶಿಲಾಶಾಸನ ಬ್ರಹ್ಮಗಿರಿ ಬೆಟ್ಟ. ಮುಂತಾದವುಗಳಿವೆ.

*-ಶಿವು. ಎಂ.ವಿ. ರಾಂಪುರ*
*9008611900*
*shivumvrampura@gmail.com*

Related Articles

Leave a Reply

Your email address will not be published. Required fields are marked *

Back to top button